ಕೊಲೋಬಸ್ ಜಾತಿಗೆ ಸೇರಿದ 8 ಬಗೆಯ ಕೋತಿಗಳ ಸಾಮಾನ್ಯ ಹೆಸರು. ಕೊಲೋಬಸ್ ಪಾಲಿಕೋಮೋಸ್ (ಕಪ್ಪು ಬಿಳಿಪು ಗ್ವೆರಿಜ಼), ಕೊ. ಬೆಡಿಂಪಸ್ (ಕೆಂಪು ಗ್ವೆರಿಜ಼), ಕೊ. ವೇರಸ್ (ಆಲಿವ್ ಗ್ವೆರಿಜ಼) ಈ ಮೂರು ಬಗೆಗಳು. ಇವು ಪ್ರೈಮೇಟ್ ಗಣದ ಸರ್ಕೋಪಿತೆಸಿಡೀ ಕುಟುಂಬಕ್ಕೆ ಸೇರಿವೆ. ಮಧ್ಯ ಆಫ್ರಿಕದ ದಟ್ಟಕಾಡುಗಳಲ್ಲಿ ಮಾತ್ರ ಇವುಗಳ ವಾಸ. ಸೆನೆಗಲ್, ಇಥಿಯೋಪಿಯ ಮತ್ತು ಅಂಗೋಲಗಳ ವಿಸ್ತಾರವಾದ ಪ್ರದೇಶಗಳಲ್ಲಿ ಕಾಣಸಿಗುತ್ತವೆ.

ಚಿಕ್ಕ ಗಾತ್ರದ ಕಪಿಗಳಿವು. ದೇಹದ ಉದ್ದ 50-70 ಸೆಂ.ಮೀ. ತೂಕ ಸುಮಾರು 12 ಕೆಜಿ. ದೇಹದಷ್ಟೇ ಉದ್ದದ ಬಾಲವಿದೆ. ತೆಳುವಾದ ದೇಹ, ಚೆನ್ನಾಗಿ ಬೆಳೆದ ಜಡ್ಡುಗಟ್ಟಿದ ಪೃಷ್ಠದ ಉಬ್ಬುಭಾಗ ಇವು ಗ್ವೆರಿಜ಼ಗಳ ಕೆಲವು ಲಕ್ಷಣಗಳು. ಹೆಬ್ಬೆರಳು ಇಲ್ಲದಿರುವುದು ಇವುಗಳ ಅತ್ಯಂತ ಮುಖ್ಯ ಲಕ್ಷಣ. ಇದರಿಂದಲೇ ಈ ಜಾತಿಗೆ ಕೊಲೋಬಸ್ ಎಂಬ ಹೆಸರು ಬಂದಿದೆ (ಗ್ರೀಕ್ ಭಾಷೆಯಲ್ಲಿ ಕೊಲೋಬಸ್ ಎಂದರೆ ಊನವಾಗಿರುವುದು ಎಂದು ಅರ್ಥ). ಕಪ್ಪು ಬಿಳುಪು ಗ್ವೆರಿಜ಼ದಲ್ಲಿ ಬೆನ್ನಿನ ಎರಡು ಪಕ್ಕಗಳಲ್ಲೂ ಬಾಲದಲ್ಲೂ ಬಹಳ ಉದ್ದವಾದ ಬಿಳಿಯ ಬಣ್ಣದ ಮತ್ತು ರೇಷ್ಮೆಯಂಥ ಕೂದಲುಗಳಿವೆ. ಕೆನ್ನೆಯ ಮೇಲೂ ಉದ್ದನೆಯ ಬಿಳಿಯ ಕೂದಲುಗಳ ಕುಚ್ಚಿದೆ, ಇದರಿಂದಾಗಿ ಇದನ್ನು ಬಿಷಪ್ ಮಂಕಿ ಎಂದು ಕರೆಯುವುದುಂಟು.

ಇವು ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ ಮತ್ತು ಪ್ರತಿ ಗುಂಪಿನಲ್ಲಿ 3 ರಿಂದ 4 ಹೆಣ್ಣುಗಳು ಹಾಗೂ 1 ರಿಂದ 3 ಗಂಡುಗಳು ಹಾಗೂ ಮರಿಗಳು ಇರುತ್ತವೆ. ಇವುಗಳು ತಮ್ಮ ಪ್ರದೇಶಗಳನ್ನು ವಿವಿಧರೀತಿಯ ಧ್ವನಿಗಳಿಂದ ರಕ್ಷಿಸಿಕೊಳ್ಳುತ್ತವೆ.

ಗ್ವೆರಿಜóಗಳು ಸಾಮಾನ್ಯವಾಗಿ ಎತ್ತರವಾದ ಮರಗಳಲ್ಲೇ ಇರುತ್ತವೆ. ನೆಲಕ್ಕೆ ಇಳಿಯುವುದು ಅಪರೂಪ. ವಿವಿಧ ಬಗೆಯ ಹಣ್ಣು, ಎಲೆಗಳನ್ನು ತಿಂದು ಬದುಕುತ್ತವೆ. ಇವು ಬಲುನಾಚಿಕೆಯ ಸ್ವಭಾವದವು. ಇವುಗಳ ದೇಹದ ಬಣ್ಣ ಹಿನ್ನೆಲೆಯೊಂದಿಗೆ ಬಲು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇವು ಸಾಮಾನ್ಯವಾಗಿ ಸ್ವಲ್ಪವೂ ಸದ್ದುಮಾಡದೆ ಅಡಗಿರುವುದರಿಂದ ಕಣ್ಣಿಗೆ ಬೀಳುವುದೇ ಅಪರೂಪ. ಗ್ವೆರಿಜ಼ಗಳನ್ನು ಅವುಗಳ ಚರ್ಮಕ್ಕಾಗಿ ಬೇಟೆಯಾಡುತ್ತಾರೆ. ಆಫ್ರಿಕದ ಮೂಲವಾಸಿಗಳು ತಮ್ಮ ತಲೆಯುಡಿಗೆ, ಮೇಲಂಗಿ, ಬಿಲ್ಲು, ಗುರಾಣಿ ಮುಂತಾದವುಗಳ ಅಲಂಕರಣಕ್ಕೆ ಈ ಚರ್ಮವನ್ನು ಉಪಯೋಗಿಸುತ್ತಾರೆ.  (ಜಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ